Straight Talk

‘ರಿಪ್ಪನ್ ಸ್ವಾಮಿ’ ಮೇಲೆ ವಿಜಯ್ ರಾಘವೇಂದ್ರ ನಿರೀಕ್ಷೆ

‘ರಿಪ್ಪನ್ ಸ್ವಾಮಿ’ ಗೆಟಪ್‌ನಲ್ಲಿ ‘ಚಿನ್ನಾರಿಮುತ್ತ’ ವಿಜಯ್‌ ರಾಘವೇಂದ್ರ

ಕಾಡಿನ ಧರ್ಮ… ನಾಡಿನ ಧರ್ಮದ ನಡುವೆ ಹರಿದ ನೆತ್ತರ ಕಥಾನಕ..!

ರೌದ್ರಾವತಾರಿ ‘ರಿಪ್ಪನ್ ಸ್ವಾಮಿ’ಯ ಕೆಂಡದ ನುಡಿ…

ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಟ ವಿಜಯ ರಾಘವೇಂದ್ರ, ರೌದ್ರಾವತಾರಿಯಾಗಿ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ‘ರಿಪ್ಪನ್‌ ಸ್ವಾಮಿ’ ಸಿನೆಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಸದ್ಯ ನಿಧಾನವಾಗಿ ‘ರಿಪ್ಪನ್‌ ಸ್ವಾಮಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಟ್ರೇಲರ್‌ ಬಿಡುಗಡೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಚಿತ್ರದ ನಾಯಕ ನಟ ವಿಜಯ ರಾಘವೇಂದ್ರ, ಚಿತ್ರದ ನಿರ್ದೇಶಕ ಕಿಶೋರ್‌ ಮೂಡಬಿದಿರೆ, ನಾಯಕಿ ಅಶ್ವಿನಿ ಚಂದ್ರಶೇಖರ್‌ ಸೇರಿದಂತೆ ಚಿತ್ರದ ಒಂದಷ್ಟು ಕಲಾವಿದರು ಮತ್ತು ತಂತ್ರಜ್ಞರು ‘ರಿಪ್ಪನ್‌ ಸ್ವಾಮಿ’ ಕುರಿತು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಒಳ್ಳೆಯ ಸಿನೆಮಾ ಮಾಡಿದ್ದೇವೆಂಬ ನಂಬಿಕೆಯಿದೆ; ವಿಜಯ ರಾಘವೇಂದ್ರ

‘ರಿಪ್ಪನ್‌ ಸ್ವಾಮಿ’ ಬಗ್ಗೆ ಮೊದಲಿಗೆ ಮಾತನಾಡಿದ ನಾಯಕ ನಟ ವಿಜಯ ರಾಘವೇಂದ್ರ, ‘ನಮ್ಮ ಇಡೀ ಚಿತ್ರತಂಡಕ್ಕೆ ಈಗ ತುಂಬ ಖುಷಿಯಾಗುತ್ತಿದೆ. ಸಿನೆಮಾದ ಟ್ರೇಲರ್‌ ನೋಡಿದ ಬಳಿಕ ಒಳ್ಳೆಯ ಸಿನೆಮಾ ಮಾಡಿದ್ದೇವೆ ಎಂಬ ಭರವಸೆ ಮೂಡಿದೆ. ‘ರಿಪ್ಪನ್ ಸ್ವಾಮಿ’ ಆಗೋದಕ್ಕೂ ಮುನ್ನ ನಿರ್ದೇಶಕ ಕಿಶೋರ್ ಮೂಡಬಿದ್ರೆ ಸಾಕಷ್ಟು ಸುತ್ತಿದ್ದಾರೆ. ‘ದಯವಿಟ್ಟು ನನಗೆ ಕಾಯುವುದಕ್ಕೆ ಹೋಗಬೇಡಿ, ಬೇರೆ ಯಾರಿಗಾದ್ರೂ ಈ ಕಥೆ ಕೊಟ್ಟು ಸಿನೆಮಾ ಮಾಡ್ಸಿ’ ಅಂದಿದ್ದೆ. ‘ಯಾರಿಗೋ ಮಾಡೋದಾಗಿದ್ರೆ ನಾನ್ಯಾಕೆ ಎರಡು ವರ್ಷ ಕಾಯ್ಬೇಕಿತ್ತು. ನೀವೇ ಈ ಕಥೆಗೆ ಬೇಕಿರುವುದು’ ಅಂತ ಹೇಳಿದ್ರು. ಅಷ್ಟು ಹುಚ್ಚುತನದಿಂದ ಈ ಸಿನೆಮಾವನ್ನು ಮಾಡಿರುವುದು. ಯಾಕೀ ಪಾತ್ರ ಅಂತ ಕೇಳಿದಾಗ ‘ಮಾಲ್ಗುಡಿ ಡೇಸ್’ ಸಂದರ್ಭದಲ್ಲಿ ಹಾಗೇ ತಮಾಷೆಗೆ ಮಾತನಾಡಿದ್ದು ಇದು. ಒಳ್ಳೆಯವನಾಗಿ ಆಗಿ ಸಾಕಾಗಿದೆ. ಸ್ವಲ್ಪ ಬೇರೆ ಥರದ ಪಾತ್ರ ಮಾಡ್ಬೇಕು ಅಂತ ಅವರಿಗೆ ಹೇಳಿದ್ದೆ. ಯಾವುದೇ ಪಾತ್ರ ಮಾಡಿದ್ರು ಚೆನ್ನಾಗಿ ಮಾಡಿದ್ದೀಯಾ ಅಂತ ಅನ್ನಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ. ಇದರಲ್ಲೂ ಅದು ಆಗಿದೆ’ ಎಂದಿದ್ದಾರೆ.

ಈ ಸಿನೆಮಾದಲ್ಲಿ ಎಲ್ಲರ ಪಾತ್ರ ಕೂಡ ಮುಖ್ಯ…

ನಟಿ ಅಶ್ವಿನಿ ಚಂದ್ರಶೇಖರ್ ಮಾತನಾಡಿ, ‘ಈ ಸಿನೆಮಾದಲ್ಲಿ ನನ್ನದು ಮಾತ್ರವಲ್ಲ ಎಲ್ಲರ ಪಾತ್ರ ಕೂಡ ಮುಖ್ಯವಾಗಿದೆ. ಮಂಗಳ ಎಂಬ ಕ್ಯಾರೆಕ್ಟರ್ ನನಗೆ ಕೊಟ್ಟಿದ್ದಾರೆ. ಇವತ್ತಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಆಗುವಂತ ಭಾವನೆಗಳನ್ನ ಇಲ್ಲಿ ತೋರಿಸಿದ್ದಾರೆ. ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿದೆ, ಸಮಾಜದಲ್ಲಿ ಹೇಗೆಲ್ಲಾ ಎದುರಿಸಬಹುದು ಎಂಬೆಲ್ಲಾ ವಿಚಾರದ ಮೇಲೆ ಫೋಕಸ್ ಮಾಡಲಾಗಿದೆ. ಇದೊಂದು ಕಂಟೆಂಟ್, ಫ್ಯಾಮಿಲಿ ಓರಿಯೆಂಟೆಡ್ ಮೂವಿ. ನಾನು ಎಲ್ಲಾ ಹೆಣ್ಣು ಮಕ್ಕಳನ್ನ ಬಿಂಬಿಸ್ತಾ ಇರುವಂತ ಪಾತ್ರ ಕೊಟ್ಟಿದ್ದಾರೆ. ತೆರೆಮೇಲೆ ಚೆನ್ನಾಗಿ ಮೂಡಿ ಬಂದಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿ ಕೊಟ್ಟರು.

ಸಹ ನಿರ್ಮಾಪಕ ಸುನೀಲ್ ಮಾತನಾಡಿ, ‘ನಮ್ಮ ಬಹಳ ಮುಖ್ಯ ಉದ್ದೇಶ ಒಂದೊಳ್ಳೆ ಕಂಟೆಂಟ್ ಇರುವ ಸಿನೆಮಾ ಕೊಡಬೇಕು ಅಂತ. ಅದೇ ಸಮಯಕ್ಕೆ ಕಿಶೋರ್ ಸರ್ ಕಥೆ ಹೇಳಿದ್ರು. ಹೀಗಾಗಿ ರಿಪ್ಪನ್ ಸ್ವಾಮಿ ಸಿನೆಮಾ ಮಾಡಿದೆವು’ ಎಂದರು.

‘ರಿಪ್ಪನ್‌ ಸ್ವಾಮಿ’ಗೆ ಚಿನ್ನೇಗೌಡರ ಮೆಚ್ಚುಗೆ…

ಚಿನ್ನೇಗೌಡ್ರು ಮಾತನಾಡಿ, ‘ನಾನು ಕೂಡ ರಿಪ್ಪನ್ ಸ್ವಾಮಿ ಟ್ರೇಲರ್ ನೋಡಿದಾಗ ಅನ್ನಿಸ್ತಾ ಇತ್ತು, ನಾನ್ ಅವತ್ತು ಇವನನ್ನ ‘ಚಿನ್ನಾರಿ ಮುತ್ತ’, ‘ಕೊಟ್ರೇಶಿ ಕನಸು’ ಸಿನೆಮಾದಲ್ಲಿ ಮಾಡಿದ ವಿಜಯ್ ರಾಘವೇಂದ್ರ ಇವನೇನಾ ಅನ್ನಿಸ್ತು. ಒಬ್ಬ ಕಲಾವಿದನಿಗೆ ಇರಬೇಕಾದ ಗುಣಗಳನ್ನ ಒಪ್ಪಿಕೊಂಡು ಬೆಳೆದಿದ್ದಾನೆ. ಈಗ ಹೇಳ್ತೀನಿ ನನ್ನ ಮಗ ವಿಜಯ್ ರಾಘವೇಂದ್ರ ಕಲಾವಿದನಾಗಿ ಬೆಳೆದಿದ್ದಾನೆ. ನನ್ನ ಭಾವ ರಾಜಕುಮಾರ್ ಅವರು ‘ಮೇಯರ್ ಮುತ್ತಣ್ಣ’ ಸಿನೆಮಾದಲ್ಲಿ ಮಾಡಿದ್ದಾರೆ. ಅದರಲ್ಲಿ ಕೋರ್ಟ್ ಸೀನ್ ಬರುತ್ತೆ. ಹೊಟೇಲ್ ಗೆ ಹೋದಾಗ ಹಣ ಇರಲ್ಲ. ರುಬ್ಬೋಕೆ ಬಿಡ್ತಾರೆ. ರುಬ್ಬೋಕೆ ಕೂತಿದ್ದ ವ್ಯಕ್ತಿಯ ಬಟ್ಟೆಯನ್ನು ನೋಡಿದಾಗ ವಾಂತಿ ಬರುತ್ತೆ. ಆದರೆ ಆತನನ್ನು ಕರೆದು ತನ್ನ ಬಟ್ಟೆಯನ್ನ ಕೊಟ್ಟಿದ್ದರು. ಕಲಾವಿದರಿಗೆ ಪಾತ್ರಧಾರಿ ಎಂಬುದು ಇರಬೇಕು. ಆ ಪಾತ್ರಕ್ಕೆ ಆಗ ಮಾತ್ರ ನ್ಯಾಯ ಕೊಡುವುದಕ್ಕೆ ಸಾಧ್ಯ. ಅದಕ್ಕೆ ನಾನು ಕಿಶೋರ್ ಗೆ ಧನ್ಯವಾದ ಹೇಳಬೇಕು. ನನ್ನ ಮಗ ಅಂತ ಇದನ್ನ ಹೇಳ್ತಾ ಇಲ್ಲ. ಚೆನ್ನಾಗಿ ಮಾಡಿದ್ದಾನೆ’ ಎಂದಿದ್ದಾರೆ.

ನಿರ್ದೇಶಕ ಕಿಶೋರ್ ಮೂಡಬಿದ್ರೆ ಮಾತನಾಡಿ, ”ಮಾಲ್ಗುಡಿ ಡೇಸ್’ ಸಿನೆಮಾ ಸಮಯದಲ್ಲಿ ಇದರ ಬಗ್ಗೆ ಚರ್ಚೆಯಾಯ್ತು. ಹೀಗಾಗಿ ಒಂದು ಕಥೆಯಿತ್ತು. ಅದನ್ನ ಡೆವಲಪ್ ಮಾಡಿಕೊಂಡು ಮಾಡಿದೆವು. ಸಿನಿಮಾ ಮಾತನಾಡಬೇಕು ಮೊದಲು. ಆಮೇಲೆ ನಾವೂ ಮಾತನಾಡಿದರೆ ಚೆಂದ. ನಮ್ಮಲ್ಲಿ ಸಾಕಷ್ಟು ಜನ ನಿರ್ಮಾಪಕರಿದ್ದಾರೆ. ಅವರೆಲ್ಲರ ಸಹಾಯದಿಂದ ಇಂದು ‘ರಿಪ್ಪನ್ ಸ್ವಾಮಿ’ ಆಗಿದೆ’ ಎಂದಿದ್ದಾರೆ.

‘ಪಂಚಾಂನನ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿದ್ದಾರೆ. ‘ಪಂಚಾನನ ಫಿಲಂಸ್’ನ ಮೊದಲನೇ ಚಿತ್ರ ಇದಾಗಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ನೀಡಿದ್ದಾರೆ. ರಂಗನಾಥ್ ಸಿ. ಎಂ ಛಾಯಾಗ್ರಹಣ, ಶಶಾಂಕ್ ನಾರಾಯಣ್ ಸಂಕಲನ ಮಾಡಿದ್ದಾರೆ.

ಇನ್ನು ಬಿಡುಗಡೆಯಾಗಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾದ ಟ್ರೇಲರ್ ನಲ್ಲಿ, ಇಷ್ಟು ದಿನ ಲವರ್‌ ಬಾಯ್, ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಂಡ ವಿಜಯ ರಾಘವೇಂದ್ರ ಇದರಲ್ಲಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ಕೈಗೆ ಕೂಡುಗೋಲು ಸಿಕ್ಕಿದ್ರೆ ಅಲ್ಲಿ ನೆತ್ತರು ಹರಿಯುತ್ತೆ. ಆ ನೆತ್ತರು ಯಾರದ್ದು..? ಕಾಡಿನ ಜನರ ಜೀವನ ಹೇಗಿರುತ್ತೆ..? ಇದೆಲ್ಲಾ ಟ್ರೇಲರ್ ನಲ್ಲಿ ಕುತೂಹಲ ಮೂಡಿಸಿದ್ದು, ಆಗಸ್ಟ್ 29ಕ್ಕೆ ‘ರಿಪ್ಪನ್ ಸ್ವಾಮಿ’ ಸಿನೆಮಾ ತೆರೆಗೆ ಬರಲಿದ್ದು, ಅದೆಲ್ಲದಕ್ಕೂ ಉತ್ತರ ಸಿಗಲಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!