Street Beat

ಇದು ‘ಕರುಣಾಕರ’ನ ಕರುಣಾಜನಕ ಕಥೆ!

ತೆರೆಗೆ ಬರುತ್ತಿದೆ ಹೊಸಬರ ‘ನಾನು ಕರುಣಾಕರ’ ಚಿತ್ರ

‘ನಾನು ಕರುಣಾಕರ’ ಚಿತ್ರದ ಆಡಿಯೋ-ಟ್ರೇಲರ್‌ ಬಿಡುಗಡೆ ಮಾಡಿದ ಚಿತ್ರತಂಡ

ತಂದೆ-ಮಗನ ಬಾಂಧವ್ಯದ ಕಥೆಗೆ ಸಿನೆಮಾ ಟಚ್‌

‘ನಾನು ಕರುಣಾಕರ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರಂಗಭೂಮಿ ಹಿನ್ನೆಲೆಯ ಯುವ ಪ್ರತಿಭೆ ನಟ ಕಂ ನಿರ್ದೇಶಕ ಆರ್ಯನ್ ತೇಜಸ್, ‘ನಾನು ಕರುಣಾಕರ’ ಎಂಬ ತಂದೆ-ಮಗನ ನಡುವಿನ ಬಾಂಧವ್ಯದ ಕಥೆಯನ್ನು ಸಿನೆಮಾ ರೂಪದಲ್ಲಿ ತೆರೆಗೆ ತರಲು ಹೊರಟಿದ್ದಾರೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ನಾನು ಕರುಣಾಕರ’ ಚಿತ್ರ ಇದೇ ಏಪ್ರಿಲ್‌ ಮೊದಲವಾರ ತೆರೆಗೆ ಬರುತ್ತಿದೆ. ಸದ್ಯ ‘ನಾನು ಕರುಣಾಕರ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚೆಗೆ ‘ನಾನು ಕರುಣಾಕರ’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಚಿತ್ರತಂಡ, ‘ನಾನು ಕರುಣಾಕರ’ ಚಿತ್ರದ ಒಂದಷ್ಟು ವಿಶೇಷತೆಗಳ ಬಗ್ಗೆ ಮಾತನಾಡಿತು.

ಎಲ್ಲರಿಗೂ ಕನೆಕ್ಟ್‌ ಆಗುವಂತಿದೆ ‘ನಾನು ಕರುಣಾಕರ’ ಚಿತ್ರದ ಕಥೆ…

‘ನಾನು ಕರುಣಾಕರ’ ಚಿತ್ರದ ಆಡಿಯೋ ಹಾಗೂ ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ಆರ್ಯನ್ ತೇಜಸ್, ”ನಾನು ಕರುಣಾಕರ’ ಪ್ರತಿಯೊಬ್ಬರ ಜೀವನಕ್ಕೂ ಕನೆಕ್ಟ್ ಆಗುವಂಥ ಚಿತ್ರ. ಅಪ್ಪ- ಮಗನ ಬಾಂಧವ್ಯ ಹಾಗೂ ಗಂಡ-ಹೆಂಡತಿಯ ಸಂಬಂಧದ ಸುತ್ತ ನಡೆಯೋ ಕಥೆ ಇದಾಗಿದೆ. ಪ್ರತಿಯೊಂದು ಮಧ್ಯಮ ವರ್ಗದ ಮನೆಯಲ್ಲೂ ಒಬ್ಬ ಕರುಣಾಕರ ಇರುತ್ತಾನೆ. ಎಲ್ಲಾ ಮಧ್ಯಮ ವರ್ಗದ ಎಲ್ಲ ಫ್ಯಾಮಿಲಿಯಲ್ಲೂ ನಡೆವ ಕಥೆಯೇ ಈ ಸಿನೆಮಾದಲ್ಲೀ ಇದೆ. ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನ ಯಲಹಂಕ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ತನ್ನ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಎಷ್ಟೆಲ್ಲ ಕಷ್ಟ ಪಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಕುಟುಂಬದ ಯಜಮಾನನಾಗಿ ನಾನು ನಟಿಸಿದ್ದೇನೆ’ ಎಂದು ಹೇಳಿದರು.

‘ಕರುಣಾಕರ’ನಿಗೆ ರಾಧಾ ಭಗವತಿ ನಾಯಕಿ

‘ನಾನು ಕರುಣಾಕರ’ ಚಿತ್ರದಲ್ಲಿ ನಾಯಕಿ ರಾಧಾ ಭಗವತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ರಾಧಾ ಭಗವತಿ, ‘ಇಲ್ಲಿಯವರೆಗೆ ನಾನು ಹೆಚ್ಚಾಗಿ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದು ನನ್ನ 5ನೇ ಚಿತ್ರ. ಈ ಚಿತ್ರದಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿಯ ಗೃಹಿಣಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುವಾಗ ನನ್ನ ಬಾಲ್ಯದ ದಿನಗಳ ನೆನಪಾಯ್ತು. ಆಕೆಗೆ ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಆಸೆಯಿರುತ್ತೆ, ಆದರೆ ಗಂಡ, ಮಗನಿಗೋಸ್ಕರ ತನ್ನ ಕನಸನ್ನು ಬದಿಗೊತ್ತಿ ಅವರಿಗೆ ಸಪೋರ್ಟ್ ಮಾಡುತ್ತಾಳೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು.

ಒಳ್ಳೆಯ ಸಿನೆಮಾ ಮಾಡುವ ಕನಸು ಇದೀಗ ನನಸು…

ನಿರ್ಮಾಪಕ ವೈಭವ್ ಸುರೇಶ್ ಮಾತನಾಡುತ್ತ, ‘ಒಂದೊಳ್ಳೇ ಸಿನಿಮಾ ಮಾಡಬೇಕೆಂದು ತುಂಬಾ ವರ್ಷಗಳಿಂದ ಕನಸಿತ್ತು, ಅದು ಈ ಸಿನೆಮಾ ಮೂಲಕ ನನಸಾಗಿದೆ. ನಾನು ನಮನ್ ನಾರಾಯಣ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿಕ್ಕ ಮಕ್ಕಳು ತಂದೆಗೆ ಹೇಗೆ ಕಷ್ಟ ಕೊಡುತ್ತಾರೆ, ಅದಕ್ಕಾಗಿ ತಂದೆ ಏನು ಮಾಡುತ್ತಾನೆ ಎಂಬುದೇ ಈ ಚಿತ್ರದ ಕಥೆ’ ಎಂದರು. ಮತ್ತೊಬ್ಬ ನಿರ್ಮಾಪಕ ನಮನ್ ನಾರಾಯಣ ಮಾತನಾಡುತ್ತ, ‘ನಿರ್ದೇಶಕರು ನನಗೆ ಹಳೇ ಸ್ನೇಹಿತರು. ಅವರು ಈ ಕಥೆ ಹೇಳಿದಾಗ ನನ್ನ ತಂದೆಯ ನೆನಪಾಯಿತು, ಈ ಥರದ ಎಷ್ಟೋ ತಂದೆಯರು ಇದ್ದಾರೆ, ಅವರಿಗೆಲ್ಲ ಈ ಸಿನೆಮಾ ಅರ್ಪಣೆ.  ಈ ಚಿತ್ರದ ಟ್ರೇಲರಿಗೆ ಶ್ರೀನಗರ ಕಿಟ್ಟಿ‌ ವಾಯ್ಸ್ ಕೂಡ ನೀಡಿದ್ದಾರೆ’ ಎಂದರು. ‘ನಾನು ಕರುಣಾಕರ’ ಚಿತ್ರದ ಆಡಿಯೋ ಹಾಗೂ ಟ್ರೇಲರ್‌ ಬಿಡುಗಡೆ ವೇಳೆ ಹಾಜರಿದ್ದ ನಟರಾದ ಲೋಕೇಶ್, ಪೇಂಟರ್ ಪಾತ್ರ ನಿರ್ವಹಿಸಿರುವ ಕರಿಸುಬ್ಬು ಚಿತ್ರದ ಬಗ್ಗೆ ಮಾತನಾಡಿದರು.

ಏಪ್ರಿಲ್‌ 3ಕ್ಕೆ ‘ನಾನು ಕರುಣಾಕರ’ ತೆರೆಗೆ

‘ಪಾಪ್ ಕಾರ್ನ್ ಸಿನೆಮಾ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣವಾಗಿರುವ ‘ನಾನು ಕರುಣಾಕರ’ ಚಿತ್ರದಲ್ಲಿ ನಾಯಕನಾಗಿ ಆರ್ಯನ್ ತೇಜಸ್ ಹಾಗೂ ಅವರ ಪತ್ನಿಯಾಗಿ ‘ಭಾರ್ಗವಿ ಎಲ್.ಎಲ್. ಬಿ’ ಖ್ಯಾತಿಯ ರಾಧಾ ಭಗವತಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಗನ ಪಾತ್ರದಲ್ಲಿ ಮಾ. ಭವೀಶ್ ಅಭಿನಯಿಸಿದ್ದಾರೆ. ಉಳಿದಂತೆ ಕರಿಸುಬ್ಬು, ಎಂ. ಕೆ. ಮಠ, ಬಿ. ಎಂ.  ವೆಂಕಟೇಶ, ಲೋಕೇಶ್‌, ಅಪೂರ್ವ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸದ್ಯ ‘ನಾನು ಕರುಣಾಕರ’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ಏಪ್ರಿಲ್‌ 3ಕ್ಕೆ ‘ನಾನು ಕರುಣಾಕರ’ ಚಿತ್ರವನ್ನು ಥಿಯೇಟರಿಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!