ಶಿವರಾಜಕುಮಾರ್ ನಟನೆಯ ‘ಬೇಲ್’ ಫಸ್ಟ್ ಲುಕ್ ರಿಲೀಸ್
ಹೊರಬಂತು ‘ಬೇಲ್’ ಚಿತ್ರದ ಫಸ್ಟ್ ಲುಕ್ ಟೀಸರ್
ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಎಂಟ್ರಿಕೊಟ್ಟ ಶಿವರಾಜಕುಮಾರ್
‘ಬೇಲ್’ಗಾಗಿ ಹೊಸ ಅವತಾರ ತಾಳಿದ ಶಿವಣ್ಣ
ಕೆಲ ತಿಂಗಳ ಹಿಂದಷ್ಟೇ ನಟ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅಭಿನಯದ ‘ಬೇಲ್’ ಸಿನೆಮಾದ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿತ್ತು. ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಸಿನೆಮಾವನ್ನು ‘ಕೆ.ವಿ.ಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಈಗಾಗಲೇ ‘ಬೇಲ್’ ಸಿನೆಮಾದ ಅಂತಿಮ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಇದೇ ವೇಳೆ ‘ಬೇಲ್’ ಸಿನೆಮಾದ ಫಸ್ಟ್‌ಲುಕ್ ವಿಡಿಯೋ ಬಿಡುಗಡೆಯಾಗಿದೆ.
ಹೇಗಿದೆ ‘ಬೇಲ್’ ಫಸ್ಟ್‌ಲುಕ್ ವಿಡಿಯೋ..?
ಸದ್ಯ ಬಿಡುಗಡೆಯಾಗಿರುವ ‘ಬೇಲ್’ ಸಿನೆಮಾದ ಫಸ್ಟ್ ಲುಕ್ ವಿಡಿಯೋ ಮಾಸ್ ಆಡಿಯನ್ಸ್ ಗಮನ ಸೆಳೆಯುವಂತಿದೆ. ‘ಬೇಲ್’ ಸಿನೆಮಾದಲ್ಲಿ ನಾಯಕ ನಟ ಶಿವರಾಜ ಕುಮಾರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ದರ್ಶನ ಕೊಟ್ಟಿರುವ ಕರುನಾಡ ಚಕ್ರವರ್ತಿ, ವಿಜಿ ಎಂಬ ಪಾತ್ರದಲ್ಲಿ ತೆರೆಮೇಲೆ ಬರುತ್ತಿದ್ದಾರೆ. ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಸಖತ್ ಕಿಕ್ ಕೊಡುವಂತಿದೆ. ಇನ್ನು ಫಸ್ಟ್‌ಲುಕ್ ಟೀಸರ್ ವಿಡಿಯೋದಲ್ಲಿ ನಾಯಕ ನಟ ಶಿವರಾಜಕುಮಾರ್ ಹಾಗೂ ಸಾಯಿ ಕುಮಾರ್ ಡೈಲಾಗ್ ಜುಗಲ್ ಬಂಧಿ ಸಿನೆಮಾದ ಮೇಲಿನ ಥ್ರಿಲ್ ಹೆಚ್ಚಿಸುವಂತಿದೆ.
ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣದ ಮೂಲಕ ತೆರೆದುಕೊಳ್ಳುವ ಫಸ್ಟ್ ಲುಕ್ ಟೀಸರ್ ನಲ್ಲಿ, ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ ಪರಿಚಯವಾಗುತ್ತದೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ‘ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ’ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ‘ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ’ ಎಂದಾಗ, ‘ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ’ ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ.
‘ಬೇಲ್’ ಸಿನೆಮಾದ ಫಸ್ಟ್‌ಲುಕ್ ಟೀಸರ್ (ಟೈಟಲ್ ಟೀಸರ್) ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ‘ಬೇಲ್’ ತೆರೆಗೆ…
ಅಂದಹಾಗೆ, ನಿರ್ದೇಶಕ ಪವನ್ ಒಡೆಯರ್ ಒಂದಷ್ಟು ಸತ್ಯಘಟನೆಗಳನ್ನು ಆಧರಿಸಿ ‘ಬೇಲ್’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುತ್ತಿದ್ದಾರೆ. ಇನ್ನು, ‘ಬೇಲ್’ ಚಿತ್ರದಲ್ಲಿ ಅನುಭವಿ ತಾಂತ್ರಿಕ ವರ್ಗ ಕೆಲಸ ಮಾಡುತ್ತಿದೆ. ಬೆಂಗಳೂರು ಮತ್ತು ಉತ್ತರ ಭಾರತದ ಹಲವೆಡೆ ‘ಬೇಲ್’ ಚಿತ್ರೀಕರಣ ನಡೆಸಲಾಗಿದೆ. ‘ಬೇಲ್’ ಸಿನೆಮಾದ ಹಾಡುಗಳಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.
‘ಬೇಲ್’ ಚಿತ್ರಕ್ಕೆ ವೈದ್ಯ ಛಾಯಾಗ್ರಹಣ ಹಾಗೂ ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವು ಸ್ಟಾರ್ ಹೀರೋಗಳಿಗೆ ವಿಭಿನ್ನ ಬಗೆಯ ಸಿನೆಮಾ ಮಾಡಿರುವ ಪವನ್ ಒಡೆಯರ್, ಇದೇ ಮೊದಲ ಬಾರಿಗೆ ಶಿವರಾಜಕುಮಾರ್ ಅವರಿಗೆ ‘ಬೇಲ್’ ಸಿನೆಮಾದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ವೆಂಕಟ್ ನಾರಾಯಣ್ ಬಂಡವಾಳ ಹೂಡಿ ನಿರ್ಮಿಸುತ್ತಿರುವ ‘ಬೇಲ್’ ಸಿನೆಮಾವನ್ನು ಇದೇ 2026ರ ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಈಗಾಗಲೇ ತನ್ನ ಟೈಟಲ್, ಕಂಟೆಂಟ್ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ ‘ಬೇಲ್’ ಹೇಗಿರಲಿದೆ ಎಂಬುದು ಇದೇ ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಗೊತ್ತಾಗಲಿದೆ.















