ಹೊಸಬರ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಅನಾವರಣ
ತೆರೆಗೆ ಬರಲು ‘ಕ್ಷೇತ್ರಪಾಲ’ ತಯಾರಿ
ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್
‘ಕ್ಷೇತ್ರಪಾಲ’ನ ತೆರೆಗೆ ತರಲು ಹೊಸ ಪ್ರತಿಭೆಗಳ ಪ್ರಯತ್ನ
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನೆಮಾಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈಗಾಗಲೇ ಕರಾವಳಿ ಸೊಗಡಿನ ಹಲವು ಸಿನೆಮಾಗಳು ತೆರೆಗೆ ಬಂದು ಯಶಸ್ವಿಯಾಗಿವೆ. ಈಗ ‘ಕ್ಷೇತ್ರಪಾಲ’ ಎಂಬ ಅಂಥದ್ದೇ ಕರಾವಳಿ ಸೊಗಡಿನ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ.
ಈಗಾಗಲೇ ಸದ್ದಿಲ್ಲದೆ ‘ಕ್ಷೇತ್ರಪಾಲ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಯಾರು ಈ ‘ಕ್ಷೇತ್ರಪಾಲ’..?
ಅಂದಹಾಗೆ, ಈ ಸಿನೆಮಾದ ಹೆಸರು ‘ಕ್ಷೇತ್ರಪಾಲ’ ಅಂತಿದ್ದರೂ, ಇದು ಕೇವಲ ಕರಾವಳಿಯ ಯಾವುದೇ ದೈವದ ಕುರಿತಾದ ಸಿನೆಮಾವಲ್ಲ. ಆದರೆ, ಧಾರ್ಮಿಕ ವಿಷಯವನ್ನು ಸಿನೆಮಾದ ಹಿನ್ನೆಲೆಯಾಗಿ ಇಟ್ಟುಕೊಂಡು, ಊರನ್ನು ರಕ್ಷಣೆ ಮಾಡುವ ವ್ಯಕ್ತಿಯೊಬ್ಬನ ಕಥೆಯನ್ನು ಈ ಸಿನೆಮಾದಲ್ಲಿ ತೆರೆಮೇಲೆ ಹೇಳಲು ಹೊರಟಿದೆ ಚಿತ್ರತಂಡ. ನ್ಯಾಯ, ನೀತಿ, ಧರ್ಮ, ನಂಬಿಕೆ, ಜೀವನ, ಹೋರಾಟ ಎಲ್ಲವೂ ‘ಕ್ಷೇತ್ರಪಾಲ’ ಸಿನೆಮಾದಲ್ಲಿ ಕಾಣಬಹುದು. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಹೊಸತರದ ಕಥೆಯೊಂದನ್ನು ‘ಕ್ಷೇತ್ರಪಾಲ’ನ ಮೂಲಕ ಪ್ರೇಕ್ಷಕರ ಮುಂದೆ ಹೇಳುತ್ತಿದ್ದೇವೆ ಎಂಬುದು ಚಿತ್ರತಂಡದ ಮಾತು.
ನ್ಯಾಯ, ಧರ್ಮದ ರಕ್ಷಣೆ ‘ಕ್ಷೇತ್ರಪಾಲ’ನ ಹೊಣೆ!
ಕರಾವಳಿಗರ ಅಚಲವಾದ ನಂಬಿಕೆಯಂತೆ, ಪ್ರತಿ ಊರಿಗೂ ಆ ಊರಿನ ರಕ್ಷಣೆಗೆ ‘ಕ್ಷೇತ್ರಪಾಲ’ನಾಗಿ ದೈವವೊಂದು ಇರುತ್ತದೆ. ಆಯಾಯ ಕ್ಷೇತ್ರದಲ್ಲಿ ನ್ಯಾಯ, ನೀತಿ, ಧರ್ಮವನ್ನು ಪಾಲನೆ-ಪೋಷಣೆ ಮಾಡಿ ಜನರನ್ನು ‘ಕ್ಷೇತ್ರಪಾಲ’ ಕಾಪಾಡುತ್ತಾನೆ ಎಂಬುದು ಕರಾವಳಿ ಭಾಗದಲ್ಲಿರುವ ಪ್ರತೀತಿ.
ಅಂಥದ್ದೇ ಒಂದು ಪ್ರತೀತಿ ಮತ್ತು ನಂಬಿಕೆಯ ಕಥೆಯನ್ನು ಇಟ್ಟುಕೊಂಡು ‘ಕ್ಷೇತ್ರಪಾಲ’ ಚಿತ್ರವನ್ನು ತೆರೆಗೆ ತರಲು ಹೊರಟಿದೆ ಚಿತ್ರತಂಡ.
‘ಕ್ಷೇತ್ರಪಾಲ’ನಾದ ರಾಘವ ಪೂಜಾರಿಗೆ ಜಗದೀಶ್ ಮಂಜಣ್ಣ ನಿರ್ದೇಶನ
ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಕನ್ನಡದ ಟಿವಿ ಮಾಧ್ಯಮದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡಿದ ಅನುಭವವಿರುವ ಮತ್ತು ರಂಗಭೂಮಿ ಹಿನ್ನೆಲೆಯಿರುವ ಜಗದೀಶ್ ಮಂಜಣ್ಣ, ‘ಕ್ಷೇತ್ರಪಾಲ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಕೆಲ ಸಿನೆಮಾಗಳಲ್ಲಿ ಸಹ ನಟನಾಗಿ ಕಾಣಿಸಿಕೊಂಡಿರುವ ರಾಘವ ಪೂಜಾರಿ ‘ಕ್ಷೇತ್ರಪಾಲ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಬಲರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ, ನಮಿತಾ ಕಿರಣ್ ಮೊದಲಾದ ಕಲಾವಿದರು ‘ಕ್ಷೇತ್ರಪಾಲ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
‘ಕ್ಷೇತ್ರಪಾಲ’ನ ಮೇಲೆ ಬಲವಾದ ನಿರೀಕ್ಷೆ…
‘ಕ್ಷೇತ್ರಪಾಲ’ನ ಕಥಾಹಂದರದ ಬಗ್ಗೆ ಮಾತನಾಡಿರುವ ನಿರ್ದೇಶಕ ಜಗದೀಶ್ ಮಂಜಣ್ಣ, ‘ಇದೊಂದು ಕರಾವಳಿ ಸೊಗಡಿನ ಕಥೆಯ ಸಿನಿಮಾ. ಇದರಲ್ಲಿ ಸಸ್ಪೆನ್ಸ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಎಂಟರ್ಟೈನ್ಮೆಂಟ್ ಅಂಶಗಳಿವೆ. ಎರಡು ಎಳೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಕರಾವಳಿಯ ಸಂಪ್ರದಾಯ, ಸೌಂದರ್ಯದ ಜೊತೆಗೆ ಊಹಿಸಲಾಗದ ರೋಚಕ ಅಂಶಗಳು ಈ ಸಿನಿಮಾದ ಹೈಲೈಟ್ಸ್. ಆದಷ್ಟು ಬೇಗ ಹೊಸರೂಪದಲ್ಲಿ ‘ಕ್ಷೇತ್ರಪಾಲ’ನನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದಿದ್ದಾರೆ. 
ಕುಂದಾಪುರ ಮೂಲದ ನಟ ರಾಘವ ಪೂಜಾರಿ, ‘ಕ್ಷೇತ್ರಪಾಲ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ರಾಘವ ಪೂಜಾರಿ, ‘ಸಹ ನಟನಾಗಿ ಈಗಾಗಲೇ ಕನ್ನಡದಲ್ಲಿ ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದ್ದೇನೆ. ಈಗ ಕರಾವಳಿಯ ಕಥೆಯೊಂದರ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ನಮ್ಮ ಊರಿನ ಕಥೆಯೊಂದನ್ನು ಈ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ತರಲು ಖುಷಿಯಾಗುತ್ತಿದೆ. ಇದರಲ್ಲಿ ಕರಾವಳಿ ಭಾಗದ ಆಚರಣೆ, ಸಂಸ್ಕೃತಿಯ ಜೊತೆಗೆ ಒಂದು ಸಂದೇಶ ಕೂಡ ಇದೆ. ಸದ್ಯ ಸಿನೆಮಾದ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ’ ಎಂದಿದ್ದಾರೆ. 
ಇದೇ ವರ್ಷಾಂತ್ಯಕ್ಕೆ ‘ಕ್ಷೇತ್ರಪಾಲ’ನ ದರ್ಶನ..!
‘ಮುತ್ತಮ್ಮ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಕ್ಷೇತ್ರಪಾಲ’ ಚಿತ್ರಕ್ಕೆ ಕೆ. ನವೀನ್ ಸುವರ್ಣ ಛಾಯಾಗ್ರಣ, ಗಿರೀಶ್ ಕುಮಾರ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಯತೀಶ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಉಡುಪಿ, ಕುಂದಾಪುರ ಸುತ್ತಮುತ್ತ ‘ಕ್ಷೇತ್ರಪಾಲ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಸುಮಾರು 10 ದಿನಗಳ ಕಾಲ ‘ಕ್ಷೇತ್ರಪಾಲ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಜುಲೈ ಅಂತ್ಯದಿಂದ ಸುಮಾರು 40 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯಕ್ಕೆ ‘ಕ್ಷೇತ್ರಪಾಲ’ನನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
‘ಕ್ಷೇತ್ರಪಾಲ’ನಿಗೆ ಗಣ್ಯರ ಶುಭ ಹಾರೈಕೆ
ಇತ್ತೀಚೆಗೆ ನಡೆದ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಮೋಶನ್ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡಪರ ಹೋರಾಟಗಾರ ನಿಂಗರಾಜ್ ಗೌಡ, ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್, ನಟ ರಾಘು ರಾಮನಕೊಪ್ಪ ಮೊದಲಾದ ಗಣ್ಯರು ಹಾಜರಿದ್ದು, ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.















